ವಿಜ್ಞಾನಮೇಳ

ದಿನಾಂಕ 30/12/2022ರ ಶುಕ್ರವಾರ ವನಿತಾಸದನದಲ್ಲಿ 6ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಂದ ವಿಜ್ಞಾನಮೇಳವನ್ನು ಆಯೋಜಿಸಲಾಗಿತ್ತು. ಈ ವಿಜ್ಞಾನ ಮೇಳಕ್ಕೆ ಮುಖ್ಯ ಅತಿಥಿಗಳಾಗಿ ಉಪನಿರ್ದೇಶಕರ ಕಛೇರಿ ಮೈಸೂರು ವತಿಯಿಂದ ಶ್ರೀಮತಿ. ಪುಷ್ಪ ವಿಜ್ಞಾನ ವಿಷಯ ಪರಿವೀಕ್ಷಕರು, ಹಾಗೂ ಶ್ರೀಯುತ. ಕೆಂಪರಾಜು ಗಣಿತ ವಿಷಯ ಪರಿವೀಕ್ಷಕರು ಅಗಿಮಿಸಿದ್ದರು. ಮತ್ತು ಟ್ರಸ್ಟ್‍ನ ಅಧ್ಯಕ್ಷರಾದ ಶ್ರೀಯುತ. ಬಿ.ಆರ್. ರವಿ, ಟ್ರಿಸ್ಟಿಗಳಾದ ಶ್ರೀಯುತ. ಶ್ರೀನಿವಾಸ್‍ರವರು, ಶ್ರೀಮತಿ. ಭಾರತಿ ಎನ್. ಅಧ್ಯಕ್ಷರು, ಶ್ರೀಮತಿ. ರೂಪವಾಣಿ ಗೌ||ಕಾರ್ಯದರ್ಶಿನಿ, ಸ್ನೇಹ ಟ್ರಸ್ಟ್ ಶ್ರೀಯುತ. ರಘರಾಮ್ ರವರು ಆಗಮಿಸಿದ್ದರು. ಹಾಗೂ ವನಿತಾ ಸದನದ ಶಿಕ್ಷಕ ವೃಂದದವರು ಭಾಗವಹಿಸಿದ್ದರು. ಬೇರೆ ಶಾಲೆಯ ಮಕ್ಕಳು, ಹೊರಗಿನವರು ಬಂದು ವೀಕ್ಷಿಸಿದರು.

ಸಹೃದಯರೇ:

      ನಿಮಗೆ 2023 ಸಾಲಿನ ಶುಭಾಶಯಗಳು. ಕಳೆದ ವಾರಾಂತ "ವನಿತಾಸದನ ಶಾಲೆ"ಯಲ್ಲಿ, "ಭಲೇ! ಶಹಭಾಸ್!" ಎನಿಸುವಂಥ, "ವಿಜ್ಞಾನ ಉಪಕರಣ ಪ್ರದರ್ಶಿನಿ"ಯು ನೆರವೇರಿತೆಂದು ಇಲ್ಲಿ ನಿಮಗೆ ತಿಳಿಸಲು ಹರ್ಷಿಸುತ್ತೇನೆ. "ಭೌತವಿಜ್ಞಾನ, ರಾಸಾಯನವಿಜ್ಞಾನ, ಜೈವಿಕವಿಜ್ಞಾನ, ವೈದ್ಯವಿಜ್ಞಾನ, ಖಗೋಳವಿಜ್ಞಾನ, ಗಣಿತವಿಜ್ಞಾನ, ಪರಿಸರವಿಜ್ಞಾನ", ಹೀಗೆ ಬಹುವಿಧ ವಿಜ್ಞಾನ ಆಯಾಮಗಳ ಕೆಲವು ಮೂಲ-ಮುಖ್ಯ ಅಧ್ಯಯನ ವಿಷಯಗಳ ಬಗ್ಗೆ ಅದರೊಳಗೆ ಸಂಘಟಿತಗೊಳಿಸಲಾಗಿದ್ದ ಪ್ರಯೋಗಗಳು, ನಮೂನೆಗಳು, ಚಿತ್ರಪಟಗಳು ಮತ್ತು ವಸ್ತುಗಳು, ವಿಜ್ಞಾನವಿಚಾರಗಳನ್ನು ಪ್ರದರ್ಶಿಸಿದಂತೆಯೇ, ಅಲ್ಲಿದ್ದ ಸಾಧನಸಾಮಗ್ರಿಗಳನ್ನು ಸಿದ್ಧಪಡಿಸಿ, ಒಟ್ಟಂದದಲ್ಲಿ ಜೋಡಿಸಿಟ್ಟಿದ್ದ ವಿದ್ಯಾರ್ಥಿಗಳ ವಿಜ್ಞಾನಾಭಿರುಚಿಯನ್ನೂ, ಜೊತೆಗೆ ಅವರಲ್ಲಿ ಅಡಗಿರುವ ಕಲ್ಪನಾತ್ಮಕ ಪ್ರತಿಭೆ, ಸೃಜನಾತ್ಮಕ ಕರಕುಶಲತೆ, ಸಾಮಾಜಿಕ ಕಾಳಜಿ, ಒಗ್ಗಟ್ಟಿನಿಂದ ಕೆಲಸದಲ್ಲಿ ತೊಡಗಿಕೊಳ್ಳುವ ಹುಮ್ಮಸ್ಸು, ಈ ಬಗೆಯ ಸಂತೋಷಕರ ಗುಣಗಳನ್ನೂ ಮನಮೋಹಕವಾಗಿ ಪ್ರಕಾಶಿಸಿದುವು. ಹೀಗೆ ಚಿತ್ರವಿಚಿತ್ರ ಆಕಾರ-ಗಾತ್ರ-ರೂಪ-ವರ್ಣಗಳಲ್ಲಿ "ವಿಜ್ಞಾನ ಮಹಿಮೆ"ಯು ರಂಜಿಸುತ್ತಿದ್ದ ಶಾಲೆಯ ಪ್ರದರ್ಶನಾಂಗಣವನ್ನು ಕಂಡವರಲ್ಲಿ, "ಈ ವಿನ್ಯಾಸವು ಶಾಲಾ ವಿಜ್ಞಾನಸ್ಪರ್ಧೆಗಳಲ್ಲಿ ಬಹುಮಾನವನ್ನು ಗೆದ್ದೇ ಗೆಲ್ಲುವಂಥದ್ದು" ಎಂಬಂಥ ವಿಶ್ವಾಸ-ಹೆಮ್ಮೆ ಸಹಜವಾಗಿಯೇ ಮೂಡುತ್ತಿತ್ತು. 

      ತಾನೇ ಒಂದು "ವಿಜ್ಞಾನ ಮಾದರಿ" ("science education model") ಆಗುವಂತೆ ಈ ಪರಿಯಲ್ಲಿ ಕಂಗೊಳಿಸಿದ ಈ ಸುಘಟನೆಯು, ವನಿತಾಸದನದ ವಿದ್ಯಾರ್ಥಿಗಳಿಂದ ಮುಂದಕ್ಕೆ ಇನ್ನೂ ಹೆಚ್ಚು ಆಕರ್ಷಕ-ಉಪಯುಕ್ತ-ವೈವಿಧ್ಯಮಯ "ವಿಜ್ಞಾನ-ವಿನೋದ" ಕಾರ್ಯಕಲಾಪಗಳನ್ನು ಪ್ರೇರಿಸಲಿ! ಸಾಮಾನ್ಯವಿಜ್ಞಾನದ ವಿಶಿಷ್ಟ "theme"ಗಳನ್ನು (ಉದಾ: Nature Conservation, Human Anatomy, Molecular Structure...) ಕುರಿತ ಕಥೆ-ನಾಟಕಗಳು, ಚರ್ಚೆ-ಪ್ರಬಂಧಗಳು, ಕಲಾತ್ಮಕ ರಚನೆಗಳು ಮುಂತಾದ ಲಕ್ಷಣಗಳನ್ನೊಳಗೊಂಡ ಸಂಭ್ರಮಗಳು, ಪ್ರಮುಖ ವಿಜ್ಞಾನದಿನಾಚರಣೆಗಳಲ್ಲೂ, ಶಾಲೆಯ ವಾರ್ಷಿಕೋತ್ಸವಗಳು ಮತ್ತು ಶಾಲೆಯಲ್ಲಿ ಸಾರ್ವಜನಿಕರು ಸೇರುವಂಥ ಇತರ ಸಮಾರಂಭಗಳಲ್ಲೂ ಪ್ರಸ್ತುತಪಡಿಸಲ್ಪಟ್ಟು, ಮೇಲಾಗಿ ಆಗಾಗ್ಗೆ ವಿಜ್ಞಾನ ಶಿಬಿರಗಳೂ ಮತ್ತು 'ಕಾರ್ಯಶಾಲೆ'ಗಳೂ ('workshop') ಹೂಡಲ್ಪಟ್ಟು, ವನಿತಾಸದನವು "ವಿಜ್ಞಾನ ಸದನ"ವಾಗಿಯೂ ವಿಶಾಲವಾಗಿ ಶೋಭಿಸಲಿ! ಇಂಥ 'ವಿಜ್ಞಾನ-ವಿಶೇಷ' ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರಿಂದಾಗಿ, ಮಕ್ಕಳಲ್ಲಿ ವಿಜ್ಞಾನ ಪ್ರಜ್ಞೆ-ಪ್ರೇಮ ಚುರುಕುಗೊಂಡು, ಅವರು ವಿಜ್ಞಾನವನ್ನೇ ಮುಂದಕ್ಕೆ ಓದಲು ಪ್ರೋತ್ಸಾಹವು ದೊರಕುವುದಲ್ಲದೆ, ವಿಜ್ಞಾನಪ್ರಸಾರಕ್ಕಾಗಿ ಇಂಥ ಹಲವಾರು ’ಸಾಹಸ’ಗಳನ್ನು ಏಳೆಂಟು ದಶಕಗಳ ಹಿಂದೆಯೇ ಕೈಗೊಂಡು, ಪಥಪ್ರದರ್ಶಕರಾಗಿ ಪ್ರಸಿದ್ಧರಾದ ವನಿತಾಸದನದ ಸ್ಥಾಪಕ ’N. ನಾಗೇಶರಾವ್‍’ರವರ ಚೇತನಕ್ಕೆ ಉತ್ತಮ ಕಾಣಿಕೆಯನ್ನು ಸಲ್ಲಿಸಿದಂತೆಯೂ ಆಗುತ್ತದೆ.

      ಇಷ್ಟು ಚೆಂದವಾಗಿ ಈ ತೋರ್ಪಾಟಿನ ಏರ್ಪಾಟನ್ನು ಮಾಡಿದ ವನಿತಾಸದನದ ವಿದ್ಯಾರ್ಥಿಗಳಿಗೂ, ಅವರಿಗೆ ಸ್ಫೂರ್ತಿಯನ್ನೂ, ಮಾರ್ಗದರ್ಶನವನ್ನೂ ನೀಡಿದ ವಿಜ್ಞಾನ ಬೋಧಕಿ 'B. ತ್ರಿವೇಣಿ’ಯವರಿಗೂ, ಮತ್ತು ಇದರ ಆಯೋಜನೆ-ಆಲೋಚನೆಗಳಲ್ಲಿ ಭಾಗವಹಿಸಿದ ಸದಸ್ಯರೆಲ್ಲರಿಗೂ, ನನ್ನ ಮನಃಪೂರ್ವಕ ಅಭಿನಂದನೆಗಳೂ, ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಯಶಸ್ಸಿಗಾಗಿ ಶುಭಾಶಯಗಳೂ ಸಲ್ಲುತ್ತವೆ. 

--ಸೀtaರಾm, ವನಿತಾಸದನಾಭಿಮಾನಿ.   

ಸರ್,
ವಿಜ್ಞಾನದ ವಸ್ತು ಪ್ರದರ್ಶನ ಮಕ್ಕಳಿಂದ ಎಂದು ತಿಳಿದು, ಅದು ನನಗೆ ಇಷ್ಟವಾದ ವಿಷಯವಾಗಿದ್ದರಿಂದ ಅದನ್ನು ನೋಡಲು ವಿಷಯ ತಿಳಿದ ತಕ್ಷಣ ನಿರ್ಧರಿಸಿದೆ.  ಬಹಳ ಚೆನ್ನಾಗಿ ಆಯೋಜಿಸಿದ್ದೀರಿ.  ಎಲ್ಲ ವಿಧ್ಯಾರ್ಥಿ ಮತ್ತು ವಿಧ್ಯಾರ್ಥಿಯಿನಿಯರ ಉತ್ಸಾಹ ನೋಡಿ ಬಹಳ ಸಂತೋಷವಾಯಿತು.  ಅಷ್ಟೊಂದು ತಯಾರಿ ಮಾಡಿಸುವ ವಿಷಯ ಸಾಮಾನ್ಯವಲ್ಲ. ಹಾಗಾಗಿ ಅವರನ್ನು ತಯಾರು ಮಾಡಿದ ಎಲ್ಲ  ಶಿಕ್ಷಕ ವೃಂದದವರಿಗೆ ನನ್ನ ವಿಶೇಷ  ಅಭಿನಂದನೆಗಳು.   ಶಿಕ್ಷಕರ ಜೊತೆ ನಿಂತಿರುವ  ಅಡಳಿತ ಮಂಡಲಿಯ ಎಲ್ಲರಿಗೂ ಅಭಿನಂದನೆಗಳು.   ವಿಧ್ಯಾರ್ಥಿಗಳೆಲ್ಲೆರೂ  ಈ ಸಂದರ್ಭವನ್ನು ಯಾವಾಗಲೂ ನೆನಪು ಇಟ್ಟು ಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ನನಗೆ  ಭಾಗವಹಿಸಲು ಅವಕಾಶ ಮಾಡಿಕೊಟ್ಟ ತಮಗೆ ವಂದನೆಗಳು.   ಸಂಪ್ರದಾಯಿಕ ದೀಪ ಬೆಳಗುವುದರ ಬದಲು ವಿಜ್ಞಾನದ ಪ್ರಯೋಗದ ಮೂಲಕ ಚಾಲನೆ ಮಾಡಿದ್ದು ನನಗೆ ಅತಿ  ಸಂತೋಷ ಕೊಟ್ಟ ವಿಷಯ.  ಈ ರೀತಿಯಲ್ಲಿ ಯೋಚಿಸಿ, ಕಾರ್ಯಗತ ಮಾಡಿರುವುದು ಅತ್ಯಂತ ಶ್ಲಾಘನೀಯ.   ಎಲ್ಲಾ ವಿಧ್ಯಾರ್ಥಿಗಳಿಗೆ ಇದೊಂದು ಸ್ಫೂರ್ತಿ ಕೊಡುವ ಕಾರ್ಯಕ್ರಮವಾಗಿರುತ್ತದೆ.
ಧನ್ಯವಾದಗಳು.
ರಘುರಾಂ.

Leave a Reply

Your email address will not be published. Required fields are marked *